ಪಿಳ್ಳೈ, ಲೋಕಾಚಾರ್ಯ
1213.  ರಾಮಾನುಜರು ಸ್ಥಾಪಿಸಿದ ಆದಿಪೀಠಕ್ಕೆ ಪಿಳೈ ಲೋಕಾಚಾರ್ಯರು 5 ನೆಯ ಪೀಠಾಧೀಶರಾದ ಮಹನೀಯರು. ರಾಮಾನುಜರ 74 ಶಿಷ್ಯರಲ್ಲಿ ಪ್ರಮುಖರಾದ 8 ಜನರಲ್ಲಿ ವಾದುಲಸ ಗೋತ್ರದ ದಾಶರಥಿ ಎಂಬುವರ ಮೊಮ್ಮಗ. ಇವರನ್ನು ತೋಡಪ್ಪ, ವಾರಣಾದ್ರೀಶ ಎಂದೂ ಕರೆಯುತ್ತಾರೆ.

ರಾಮಾನುಜರ ಅನಂತರ ಕ್ರಮವಾಗಿ ಪರಾಶರ ಭಟ್ಟಾರ್ಯ, ವೇದಾಂತಿ ಮಾಧವದಾಸ, ನಂಬಿಲ್ಲ ಇವರು ಆದ ಅನಂತರ ಲೋಕಾಚಾರ್ಯರು ಪೀಠಾಧೀಶರಾದರು. ನಂಬಿಲ್ಲರನ್ನು ಲೋಕಾಚಾರ್ಯರೆಂದು ಕರೆಯಲಾಗಿತ್ತು. ಹೀಗಾಗಿ ಇಲ್ಲಿ ಗುರು ಮತ್ತು ಶಿಷ್ಯರ ಹೆಸರುಗಳೆರಡೂ ಒಂದೇ ಆದುದರಿಂದ ಶಿಷ್ಟ ಲೋಕಾಚಾರ್ಯರನ್ನು ಪಿಳ್ಳೈ ಲೋಕಾಚಾರ್ಯರೆಂಬ ಹೆಸರಿನಿಂದ ಕರೆಯಲಾಯಿತು. 

ಶ್ರೀರಂಗಂನಲ್ಲಿ ಹುಟ್ಡಿದ ಆಚಾರ್ಯರು ಸುಮಾರು 70 ವರ್ಷ ಕಾಲ ಜೀವಿಸಿದ್ದು ತಮ್ಮ ಜೀವನವನ್ನು ಸಂಪೂರ್ಣವಾಗಿ ಭಗವಂತನಿಗೆ ಅರ್ಪಿಸಿದ್ದರು. ಮಲ್ಲಿಕಾಫರನ ಆಕ್ರಮಣ ಕಾಲದಲ್ಲಿ ಶ್ರೀರಂಗಂನಲ್ಲಿದ್ದ ಉತ್ಸವ ಮೂರ್ತಿಯನ್ನು ಹೆಣಗಳ ಮಧ್ಯೆ ಅಡಗಿಸಿಟ್ಟು ಸುರಕ್ಷಿತವಾಗಿ ಅದನ್ನು ತಿರುಪತಿಗೆ ತೆಗೆದುಕೊಂಡು ಹೋಗುವ ಸಾಹಸ ಮಾಡಿದರು. ಆದರೆ ದಾರಿ ಮಧ್ಯದಲ್ಲಿಯೇ ನಿಧನರಾದರು. ಇವರು ಕಾಪಾಡಿದ ಆ ಮೂರ್ತಿಯನ್ನು ಇಂದಿಗೂ ಶ್ರೀರಂಗಂನಲ್ಲಿ ಕಾಣಬಹುದು.
ಪಿಳ್ಳೈ ಆವರು ರಚಿಸಿದ ಹಲವಾರು ಗ್ರಂಥಗಳಲ್ಲಿ 18 ಕೃತಿಗಳು ಬಹುಮುಖ್ಯವಾದವುಗಳು. ಅವುಗಳೆಂದರೆ ಮುಮುಕ್ಷುಪ್ಪಡಿ, ಪ್ರಮೇಯಶೇಖರ, ನವರತ್ನಮಾಲ, ತನಿಪ್ರಣವ, ಪ್ರಪನ್ನಪರಿತ್ರಾಣ, ಯಾದೃಚ್ಚಿಕಪ್ಪಡಿ, ದ್ವಯಮ್, ಸಾರಸಂಗ್ರಹ ಪರಂದಪ್ಪಡಿ, ಸಂಸಾರ ಸಾಮ್ರಾಜ್ಯಮ್, ಶ್ರೀಯಃಪತಿಪ್ಪಡಿ, ಚರಮಮ್, ಅರ್ಚಿರಾದಿ, ನವವಿಧ ಸಂಬಂಧ, ಆರ್ಥಪಂಚಕ, ತತ್ತ್ವತ್ರಯ, ತತ್ತ್ವಶೇಖರ ಮತ್ತು ಶ್ರೀ ವಚನ ಭೂಷಣ. ಇವುಗಳಲ್ಲಿ ಮೊದಲನೆಯ 13 ಕೃತಿಗಳು ತಮಿಳಿನಲ್ಲೂ, ಉಳಿದವು ಸಂಸ್ಕøತದಲ್ಲೂ ಇವೆ. ಇವರದು ಮಣಿಪ್ರವಾಳಶೈಲಿ. ವಿಶಿಷ್ಟಾದ್ವೈತ ತತ್ತ್ವವನ್ನೂ ಧರ್ಮವನ್ನೂ ಜನಸಾಮಾನ್ಯರಿಗೆ ತಿಳಿಯುವಂತೆ ರಚಿಸಿರುವುದೇ ಇವುಗಳ ವೈಶಿಷ್ಟ್ಯ. 

ಪಿಳ್ಳೈ ಲೋಕಾಚಾರ್ಯರು ತಮ್ಮ ತತ್ತ್ವತ್ರಯ ಗ್ರಂಥದಲ್ಲಿ ಬ್ರಹ್ಮ, ಚಿತ್ ಮತ್ತು ಅಚಿತ್ ಎಂಬ ಮೂರು ತತ್ತ್ವ ಸ್ವರೂಪಗಳ ಬಗ್ಗೆ ಸಂಕ್ಷಿಪ್ತ ವಿವೇಚನೆಯನ್ನೂ ಅವುಗಳಿಗಿರುವ ಪರಸ್ಪರ ಸಂಬಂಧದ ಬಗ್ಗೆ ವಿವರಣೆಯನ್ನೂ ತತ್ತ್ವಶೇಖರ ಗ್ರಂಥದಲ್ಲಿ ಭಗವಾನ್ ನಾರಾಯಣನ ಸರ್ವೋತ್ತಮ ತತ್ತ್ವವನ್ನೂ ಜಗತ್ ಕಾರಣತ್ವವನ್ನೂ ಜೀವಾತ್ಮದ ಸ್ವರೂಪವನ್ನೂ ಅದರ ಅಂತಿಮ ಗುರಿಯನ್ನೂ (ಮೋಕ್ಷವನ್ನೂ) ಶರಣಾಗತ ತತ್ತ್ವವನ್ನೂ ವಿವರಿಸಿ, ಭಗವಲ್ ಕೈಂಕರ್ಯವೇ ಜೀವಿಯ ಪರಮಪುರುಷಾರ್ಥವೆಂದೂ ಸಾರಿದ್ದಾರೆ. ಮುಕ್ತಿ ಭಗವದನುಗ್ರಹದಿಂದ ದೊರೆಯುತ್ತದೆ. ಪ್ರಪತ್ತಿಯೆ ಅದರ ಮುಖ್ಯ ಸಾಧನ.

ಪ್ರಪತ್ತಿಯಲ್ಲಿ ಅವ್ಯವಹಿತ ಅಥವಾ ಆರ್ತರೂಪ ಪ್ರಪತ್ತಿ ಮತ್ತು ವ್ಯವಹಿತ ಅಥವಾ ದೃಪ್ತ ಪ್ರಪತ್ತಿ ಎಂದು ಎರಡು ಬಗೆ. ಪ್ರಪತ್ತಿಗೆ ಜೀವೀ ಕರ್ಮಗಳನ್ನು ಮಾಡುವ ಅವಶ್ಯಕತೆ ಇಲ್ಲ. ಭಕ್ತರ ದೀನ ಸ್ಥಿತಿಯನ್ನು ನೋಡಿ ನಾರಾಯಣನಲ್ಲಿ ಅನುಗ್ರಹ ಶಕ್ತಿ ತನಗೆ ತಾನೆ ಉತ್ಪನ್ನವಾಗುತ್ತದೆ. ಭಕ್ತನ ವಿಷಯದಲ್ಲಿ ಪರಮಾತ್ಮನ ಕೃಪೆ ಅಹೇತುಕವಾದ್ದು. ಇದು ಅರ್ಥರೂಪ ಪ್ರಪತ್ತಿ.

ವ್ಯವಹಿತ ಅಥವಾ ದೃಪ್ತ ಪ್ರಪತ್ತಿಯಲ್ಲಿ ಭಕ್ತ ಭಗವಂತನಿಗೆ ಶರಣಾಗತನಾಗಿದ್ದರೂ ವಿಹಿತ ಕರ್ಮಾಚರಣೆ ಮತ್ತು ನಿಷಿದ್ಧಕರ್ಮ ತ್ಯಾಗಗಳಲ್ಲಿ ನಿರತನಾಗಿರಬೇಕಾಗುತ್ತದೆ.

ಶ್ರೀರಾಮಾನುಜರ ಅನಂತರ ಪ್ರಾರಂಭವಾದ ತೆಂಕಲೈ ಮತ್ತು ವಡಗಲೈ ಎಂಬ ಶಾಖೆಗಳಲ್ಲಿ ಪಿಳ್ಳೈಯವರು ತೆಂಕಲೈ ಶಾಖೆಗೂ ವೇದಾಂತ ದೇಶಿಕರು ವಡಗಲೈ ಶಾಖೆಗೂ ನೇತಾರರಾದರೆಂದು ಪ್ರತೀತಿ. ತೆಂಕಲೈ ಶಾಖೆಯವರು ಮಾರ್ಜಾಲ ಕಿಶೋರನ್ಯಾಯವನ್ನು ಪ್ರತಿಪಾದಿಸಿದರೆ ವಡಗಲೈ ಶಾಖೆಯವರು ಮರ್ಕಟ ಕಿಶೋರ ನ್ಯಾಯವನ್ನು ಪ್ರತಿಪಾದಿಸುತ್ತಾರೆ.
(ವೈ.ಎಸ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ